Click here for the English translation.
೨೦೧೨ರಲ್ಲಿ ಮೊದಲುಗೊಂಡ ಬೋಧನೆಯ ನನ್ನ ಪಯಣದಲ್ಲಿ ಆಂಗ್ಲ ಭಾಷೆ ಮತ್ತು ಸಾಕ್ಷರತೆಯ ವಿಷಯದಲ್ಲಿ ಬಹಳಷ್ಟು ಕಲಿಯಲು, ಕಲಿಸಲು, ನನಗೆ ಸದವಕಾಶಗಳು ದೊರೆತಿವೆ. ಆದರೆ, ನನ್ನ ಕನಸಿನ ಮತ್ತು ಮನಸ್ಸಿನ ಭಾಷೆಯಾದ ಕನ್ನಡದಿಂದ ದುರದೃಷ್ಟವಶಾತ್ ಪಿ. ಯು. ಸಿ. ಮುಗಿದಾಗಿಂದ ನಾನು ದೂರವೇ ಇದ್ದೆ. ೨೦೨೧ರಲ್ಲಿ ಮೊತ್ತಮೊದಲ ಬಾರಿ ಕನ್ನಡ ಕಲಿಸುವ ಅವಕಾಶ ನನಗೆ ಮೂಡಿತು.
ಅಧ್ಯಯನ ಮತ್ತು ಅಧ್ಯಾಪನದ ವೃತ್ತಿಯಲ್ಲಿ ಪ್ರತಿದಿನವೂ ಸುದಿನ. ಅರ್ಥವಾಗದೆ ಇದ್ದದ್ದು ಅರ್ಥವಾದಾಗ, ಗೊತ್ತಿಲ್ಲದ ವಿಷಯ ಕಲಿತಾಗ, ಹೊರನೋಟಕ್ಕೆ ಬೇರೆಯಾಗಿ ತೋರುವ ವಿಷಯಗಳ ಸಾಮ್ಯತೆ ತಂತಾನೇ ಮನಸ್ಸಿಗೆ ತೋಚಿದಾಗ, ವಿದ್ಯಾರ್ಥಿಗೆ ಏನು ಅರ್ಥವಾಗಿಲ್ಲ ಎಂದು ಕಂಡುಹಿಡಿದಾಗ, ಅರ್ಥೈಸುವ ಪ್ರಯತ್ನ ಸಫಲವಾದಾಗ, ವಿದ್ಯಾರ್ಥಿ ಇನ್ನಷ್ಟು ಕಲಿಯಲು ಉತ್ಸಾಹದಿಂದ ಸಿದ್ಧವಾದಾಗ, ಆಗುವ ಭಾವಗಳ ವರ್ಣನೆ ಕಷ್ಟ. ಆನಂದ, ಉತ್ಸಾಹ, ಆತ್ಮವಿಶ್ವಾಸ, ಕುತೂಹಲ, ಇನ್ನೂ ಹೆಚ್ಚು ಕಲಿಯಲು ಆತುರತೆ, ಇವೆಲ್ಲಾ ಸೇರಿದ ಒಂದು ಅನನ್ಯ ಅನುಭವ.
ಅಧ್ಯಾಪನೆಗಿಂತ ಒಳ್ಳೆಯ ವೃತ್ತಿ ಇರುವುದೇ ಅಸಾಧ್ಯ ಎಂದು ಭಾವಿಸಿದ್ದ ನನಗೆ, ಇದೆಲ್ಲದರ ಜೊತೆ ಒಂದು ಹೊಸ ಬಗೆಯ ಆತ್ಮತೃಪ್ತಿ ಕನ್ನಡ ಕಲಿಸಲು ಆರಂಭಿಸಿದಾಗ ಅನುಭವವಾಯಿತು. ಪರದೇಶದಲ್ಲಿ ಹತ್ತಾರು ವರ್ಷಗಳಿದ್ದ ಮೇಲೆ ತಾಯ್ನಾಡಿಗೆ ಹಿಂದಿರುಗಿದಾಗ, ಬಹುಕಾಲದ ನಂತರ ಅಜ್ಜಿ ಮಾಡಿಕೊಟ್ಟ ಅನ್ನ ಸಾರು ಸವಿದಾಗ, ಕಳೆದುಹೋದ ಅಮೂಲ್ಯವಾದ ವಸ್ತು ಮತ್ತೆ ಸಿಕ್ಕಾಗ ಆಗುವ ಸಮಾಧಾನದ ಹಾಗೆ.
ಎಲ್ಲೆಲ್ಲೋ ತಿರುಗಿ ಏನೇನನ್ನೋ ಹುಡುಕಿ ನನ್ನೊಳಗೇ ನಾನು ಮರಳಿದ್ದೆ.
ಕನ್ನಡ ತೋರಿದ ಬೆಳಕಿನೆಡೆಗೆ ಕಳೆದ ಮೂರು ವರ್ಷಗಳಿಂದ ನಿಧಾನವಾಗಿಯೂ, ನಿಶ್ಚಯವಾಗಿಯೂ ಸಾಗುತ್ತಿದ್ದೇನೆ. ನಾನು ಪ್ರತಿದಿನ ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ, ಸಾಹಿತ್ಯ, ಇತಿಹಾಸ, ಶಿಕ್ಷಣಶಾಸ್ತ್ರ ಕಲಿಯುತ್ತಿರುವಂತೆ ನನ್ನ ಪುಟ್ಟ ವಿದ್ಯಾರ್ಥಿಗಳು ನಗುನಗುತ ಕನ್ನಡ ಓದಿ ಬರೆಯಲು ಕಲಿಯುತ್ತಿದ್ದಾರೆ. ಅತ್ಯುನ್ನತ ಮಕ್ಕಳ ಸಾಹಿತ್ಯವನ್ನು ದಿನನಿತ್ಯ ಕೇಳಿ, ಹಾಡಿ, ಓದಿ ಸವಿಯುತ್ತಿದ್ದಾರೆ.
ಕನ್ನಡ ಸರಸ್ವತಿಯನ್ನು ಒಲಿಸುವ ನನ್ನ ಈ ಪಯಣದಲ್ಲಿ ನಾನು ಕಲಿಯುವುದನ್ನು ಮರೆಯದೆ ಉಳಿಸಿಕೊಳ್ಳಲು ಕತ್ತಲೆಯಿಂದ ಕನ್ನಡದೆಡೆಗೆ ಎಂಬ Substack sectionಅನ್ನು ಸರಸ್ವತಿ ಪೂಜೆಯ ಈ ಪುಣ್ಯ ದಿನದಂದು ಆರಂಭಿಸುತ್ತಿದ್ದೇನೆ. ಕನ್ನಡ ಕಲಿಸಲು ಯತ್ನಿಸುತ್ತಿರುವ ಶಿಕ್ಷಕರಿಗಾಗಲೀ, ಪೋಷಕರಿಗಾಗಲೀ ನನ್ನ ಬರಹದಿಂದ ಉಪಯೋಗವಾದರೆ ಇನ್ನೂ ಸಂತೋಷ.
ನನಗೆ ಕನ್ನಡ ಓದಲು, ಬರೆಯಲು, ಸವಿಯಲು ಹೇಳಿಕೊಟ್ಟ, ನನ್ನ ಗುಂಡು ಬರಹದ ಬಗ್ಗೆ ಹೆಮ್ಮೆ ಪಟ್ಟ, ನನ್ನ ತಪ್ಪುಗಳನ್ನು ಪ್ರೀತಿಯಿಂದ ತಿದ್ದಿದ ನನ್ನ ಶಿಕ್ಷಕ/ಶಿಕ್ಷಕಿಯರಾದ ಸುಗುಣ ಕಾಂತಿ ಮಿಸ್, ವಿಜಯ್ ಸರ್, ಮಧುಮಾಲತಿ ಮಿಸ್, ಹಾಗೂ ಪಿ.ಯು.ಸಿಯ ಕನ್ನಡ ಸರ್, ಎಲ್ಲರಿಗೂ ನಾನು ಸದಾ ಆಭಾರಿ. ಎಂಟನೆಯ ತರಗತಿಯಲ್ಲಿ ಎಲ್ಲರೂ ಹೆಚ್ಚು ಅಂಕಗಳಿಸಲು ಸಂಸ್ಕೃತಕ್ಕೆ ಬದಲಾಗುತ್ತಿದ್ದಾಗ ನನ್ನ ಗಣಿತ ಶಿಕ್ಷಕಿಯಾಗಿದ್ದ ಸವಿತ ಮಿಸ್ ಅವರು, "ನೀನು ಕನ್ನಡ ಓದು; ಅದರಲ್ಲೇ ಅಂಕ ಗಳಿಸಿ ತೋರಿಸು," ಎಂದು ಪ್ರೋತ್ಸಾಹಿಸಿದ್ದರು. ಮುಂದೆ, ರಾಮಾಯಣ, ಮಹಾಭಾರತ ಪರೀಕ್ಷೆಗಳನ್ನು ಎಲ್ಲರೂ ಆಂಗ್ಲಭಾಷೆಯಲ್ಲಿ ಬರೆಯುತ್ತಿದ್ದಾಗ, "ಕನ್ನಡದಲ್ಲೇ ಬರಿ, ನಮ್ಮ ದೇಶದ ಕಥೆಯನ್ನು ಆಂಗ್ಲದಲ್ಲಿ ಯಾಕೆ ಬರೆಯಬೇಕು?" ಎಂದು ಅವರೇ ನನಗೆ ತಿಳಿಹೇಳಿದ್ದರು. ಆಗ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಪಕ್ವತೆ ನನಗೆ ಇರಲಿಲ್ಲ. ರಾಮಾಯಣ ಪರೀಕ್ಷೆಯಲ್ಲಿ ಬೆಂಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದದ್ದು ನನಗೆ ಕನ್ನಡಲ್ಲಿದ್ದ ಆತ್ಮವಿಶ್ವಾಸವನ್ನೂ, ಪ್ರೀತಿಯನ್ನೂ ಹೆಚ್ಚಿಸಿತು.
ಪ್ರತಿಸಂಜೆ ಓದುವಾಗಲೂ ನನ್ನ ಜೊತೆಯೇ ಇದ್ದು ನನ್ನ ಪ್ರತಿಯೊಂದು ತಪ್ಪನ್ನೂ ತಾಳ್ಮೆಯಿಂದ ತಿದ್ದಿದ ನನ್ನ ತಾಯಿಯನ್ನು ನಿತ್ಯವೂ ನೆನೆಸಿಕೊಳ್ಳುತ್ತೇನೆ.
ಓದುಗರು ನನ್ನ ಬರಹದಲ್ಲಿ ಇರಬಹುದಾದ ಲೋಪದೋಷಗಳನ್ನು ನನಗೆ ತಿಳಿಸಿದರೆ ಅವುಗಳನ್ನು ವಿನಯದಿಂದ ಸ್ವೀಕರಿಸಿ ತಿದ್ದಿಕೊಳ್ಳುತ್ತೇನೆ. ನನ್ನ ಆಂಗ್ಲ Substackನಂತೆಯೇ, ಈ ಬರಹಗಳನ್ನೂ ಓದುಗರು ಸ್ವಾಗತಿಸಿ ಪ್ರೋತ್ಸಾಹಿಸುತ್ತಾರೆಂದು ನಂಬಿದ್ದೇನೆ.


